ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನದ ಲಕ್ಷಣಗಳು

ಲೇಖಕರು :
ಪ್ರಭಾಕರ ಶಿಶಿಲ
ಶನಿವಾರ, ಡಿಸೆ೦ಬರ್ 5 , 2015

ಯಕ್ಷಗಾನ ಮತ್ತು ಬಯಲಾಟ ಇವು ಬಹುತೇಕವಾಗಿ ಸಂವಾದಿ ಪದಗಳು. ಎರಡನ್ನೂ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಯಕ್ಷಗಾನ ಸಮಗ್ರ, ಕರ್ನಾಟಕದ ಅನನ್ಯ ಕಲೆ. ಕೇರಳಕ್ಕೆ ಕಥಕ್ಕಳಿ ಇರುವಂತೆ ಕರ್ನಾಟಕಕ್ಕೆ ಯಕ್ಷಗಾನ. ರಾಷ್ಟ್ರಕವಿ ಗೋವಿಂದ ಪೈಗಳು ಯಕ್ಷಗಾನವನ್ನು ದೇಸೀ ಕಣ್ಣು ಎಂದು ಕರೆದಿದ್ದಾರೆ.

‘ಯಕ್ಷಗಾನವು ಗಾನ, ವಾದನ, ನೃತ್ಯವನ್ನೊಳಗೊಂಡ ಒಂದು ಜಾನಪದ ಸಮ್ಮಮಿಶ್ರ ಕಲೆ’ ಎಂದು ಪ್ರೊ. ಟಿ. ಕೇಶವ ಭಟ್ಟ ಅಭಿಪ್ರಾಯ ಪಡುತ್ತಾರೆ. [ಯಕ್ಷಗಾನ ಕಲಾದರ್ಶನ, 2002, ಪು 2].

ಡಾ. ಶಿವರಾಮ ಕಾರಂತರು ‘ಮೋಹಕವಾದ ಒಂದು ಸಂಗೀತ ಸಂಪ್ರದಾಯಕ್ಕೆ ಗಂಧರ್ವ ಗಾನ ಎಂದು ಒಂದು ಸಮಾಜ ಕರೆಯಿತಾದರೆ ಅದಕ್ಕಿಂತ ಭಿನ್ನವಾದ ಶೈಲಿಯುಳ್ಳ ಮತ್ತೊಂದು ಗಾನ ಸಂಪ್ರದಾಯವನ್ನು ಯಕ್ಷಗಾನವೆಂದು ನಮ್ಮ ನಾಡಿನ ಜನರು ಕರೆದಿರ ಬೇಕೆಂದು ನನಗನಿಸುತ್ತದೆ’ [ಯಕ್ಷಗಾನ ಬಯಲಾಟ, 1957, ಪುಟ 2] ಎಂದು ಹೇಳಿದ್ದಾರೆ.

ವೇತೂರು ಪ್ರಭಾಕರ ಶಾಸ್ತ್ರಿಗಳ ಪ್ರಕಾರ ‘ಆಂಧ್ರದ ಗುಂಟೂರು ಕಡೆಯಲ್ಲಿ ಇರುವ ಜಕ್ಕಲು ಅಥವಾ ಯಕರು ಎಂಬ ಸಂಗೀತ ನರ್ತನಾದಿಗಳಲ್ಲಿ ನಿಯುಕ್ತರಾದ ಜನವರ್ಗ ದಿಂದ ಜಕ್ಕಲ ಪಾಟು ಉಂಟಾಗಿ, ಅದು ಯಕ್ಷಗಾನವೆಂದು ಕರೆಯಲ್ಪಟ್ಟಿರಬಹುದು ‘ [ಅಮೃತ ಸೋಮೇಶ್ವರ, ಯಕ್ಷಾಂದೋಳ, 1995ಪುಟ 3].

‘ಗಾಂಧರ್ವ ರೀತಿಗಿಂತ ಬೇರೆಯಾಗಿ ನರ್ತನಾನುಸಾರವಾಗಿ ರಾಗದ ಧಾಟಿಯನ್ನೂ, ತಾಳಗತಿಯನ್ನೂ ಚಾಲನೆಗೊಳಿಸುವುದರಿಂದಲೇ ಯಕ್ಷಗಾನವೆಂಬ ಹೆಸರಾಗಿದೆ’ ಎಂದು ವೆಂಕಟರಾಯಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ [ಯಕ್ಷಗಾನ ಮಕರಂದ, 980, ಪುಟ 28].

ಡಾ. ರಾಘವ ನಂಬಿಯಾರರ ಅಭಿಪ್ರಾಯದ ಪ್ರಕಾರ ‘ಯಕ್ಷ ಎಂಬುದು ಜಾನಪದ ದೈವಗಳನ್ನು ಉದ್ದೇಶಿಸುವ ಶಬ್ದ. ಈ ದೈವಗಳ ಆರಾಧನೆ ಮೂರ್ತಿ ಪೂಜೆಯ ರೂಪದಲ್ಲಿದೆ. ಮೂರ್ತಿಯ ಮುಂದೆ ಉತ್ಸವಾಚರಣೆಯ ಕಾಲದಲ್ಲಿ ಹಾಡು, ನೃತ್ಯಗಳನ್ನು ಸೇವಾರೂಪದಲ್ಲಿ ನಡೆಸುತ್ತಿದ್ದರು. ದೇವರ ಮಹಿಮೆಯನ್ನು ನಿರೂಪಿಸುವ ಕಥಾನಕಗಳನ್ನು ದೇವರ ವೇಷಧಾರಣೆ ಮೂಲಕ ಅಭಿನಯಿಸಿ ತೋರಿಸುವ ಸ್ಧಿತಿ ವಿಕಾಸಗೊಂಡಿತು. ಈ ರಂಗ ಪ್ರದರ್ಶನದ ಪಠ್ಯವನ್ನು ಮತ್ತು ಹಾಡುವ ಕ್ರಮವನ್ನು ‘ಗಾನ’ ಎಂದರು. ಯಕ್ಷ ದೇವರಿಗಾಗಿ ಇರುವ ಗಾನವೇ ‘ಯಕ್ಷಗಾನ’ ಎನಿಸಿತು. ಯಕ್ಷಾರಾಧನೆ ಬೌದ್ಧರಿಂದ ವೈದಿಕರ ಅಂಕೆಗೆ ಬಂದಾಗ ಯಕ್ಷರು ವೈದಿಕ ಪುರಾಣಾಂತರ್ಗತ ದೇವರಾದರು. ಯಕ್ಷ ನಿಷ್ಠೆ ಉಳಿಸಿಕೊಂಡ ಜೈನ ಅಧಿಕಾರಿಗಳ ಕಾರಣ ಆ ದೇವರ ಗಾನಕ್ಕೆ ಯಕ್ಷಗಾನ ಎಂಬ ಹೆಸರು ನೆಲೆಗೊಂಡಿತು. ಇಲ್ಲಿನ ಹಾಡುಗಾರಿಕೆ ಗಾಂಧಾರ ಗ್ರಾಮಕ್ಕೆ ಸಂಬಂಧಪಟ್ಟದ್ದಾಗಿರಬಹುದು. [ ಹಿಮ್ಮೇಳ, 2007, ಪುಟ 20]

ಯಕ್ಷಗಾನದ ಲಕ್ಷಣಗಳು

ಯಕ್ಷಗಾನವು ಪಾಮರರಾದ ಬಡ ಶೂದ್ರರಿಂದ ಮತ್ತು ಅತಿಶೂದ್ರರಿಂದ ಹುಟ್ಟಿದ ಜಾನಪದಕಲೆ. ಯಕ್ಷಗಾನವು ಸಮಗ್ರ ಕರ್ನಾಟಕದ ಒಂದು ಸಾಂಪ್ರದಾಯಿಕ ಕಲೆಯಾಗಿದ್ದು ಅದು ಏಕಕಾಲದಲ್ಲಿ ಶಾಸ್ತ್ರೀಯತೆಯ ಮತ್ತು ಜಾನಪದೀಯ ಲಕ್ಷಣಗಳನ್ನು ಒಳಗೊಂಡಿದೆ. ಅದು ಹಿಮ್ಮೇಳ, ವೇಷಭೂಷಣ, ನೃತ್ಯ ಮತ್ತು ಸಂಭಾಷಣೆಗಳನ್ನು ಒಳಗೊಂಡ ಒಂದು ಪ್ರದರ್ಶನ ಕಲೆಯಾಗಿದೆ. ಅದು ಸಾಹಿತ್ಯವನ್ನು ಆಧರಿಸಿದ್ದು, ಯಕ್ಷಗಾನ ಸಾಹಿತ್ಯವನ್ನು ಪ್ರಸಂಗ ಎಂದು ಕರೆಯಲಾಗುತ್ತದೆ. ಯಕ್ಷಗಾನವು ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಹಾಡುನರ್ತನ ಮತ್ತು ಸಂಭಾಷಣೆಯ ಮೂಲಕ ಅಭಿವ್ಯಕ್ತಿಸುವ ಸಾಮುದಾಯಿಕ ಕಲೆಯಾಗಿದೆ.

ಯಕ್ಷಗಾನಕ್ಕೆ ನಾಲ್ಕು ಅಂಗಗಳಿವೆ :

1. ಸಾಹಿತ್ಯ :

ಯಕ್ಷಗಾನ ಸಾಹಿತ್ಯವನ್ನು ಪ್ರಸಂಗ ಎಂದು ಕರೆಯಲಾಗುತ್ತದೆ. ಅದು ಪದ್ಯರೂಪದಲ್ಲಿರುವ ಕಥಾವಸ್ತು ಆಗಿರುತ್ತದೆ. ಯಕ್ಷಗಾನದ ಬಹುತೇಕ ಪ್ರಸಂಗಗಳು ಮಹಾಕಾವ್ಯ ಮತ್ತು ಪುರಾಣಗಳನ್ನು ಆಧರಿಸಿವೆ. ಜಾನಪದ ಶೂರರನ್ನು, ಐತಿಹ್ಯ ಮತ್ತು ಇತಿಹಾಸವನ್ನು ಆಧರಿಸಿದ ಪ್ರಸಂಗಗಳೂ ಸಾಕಷ್ಟು ನಿರ್ಮಾಣವಾಗಿವೆ. ಸಮಕಾಲೀನ ಸಮಸ್ಯೆಗಳಾದ ಪರಿಸರ ಸಂರಕಣೆ, ಜನಸಂಖ್ಯಾ ನಿಯಂತ್ರಣ, ಸಾಕರತೆ, ಏಡ್ಸ್‌ ಮತ್ತಿತರ ರೋಗ ನಿರ್ಮೂಲನ, ಪಾನ ನಿಷೇಧಇತ್ಯಾದಿ ವಸ್ತುಗಳನ್ನು ಆಧರಿಸಿ ರಚಿಸಲ್ಪಟ್ಟ ಪ್ರಸಂಗ ಗಳೂ ಇವೆ. ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಮತ್ತು ತೊರವೆ ರಾಮಾಯಣಗಳನ್ನು ಆಧರಿಸಿ ಅನೇಕ ಯಕ್ಷಗಾನ ಪ್ರಸಂಗಗಳು ನಿರ್ಮಾಣವಾಗಿವೆ.

2. ನಾದ ಮತ್ತು ನೃತ್ಯ :

ಯಕ್ಷಗಾನ ಸಾಹಿತ್ಯ ಪದ್ಯರೂಪದಲ್ಲಿದ್ದು ಹಾಡುಗಾರರನ್ನು ಭಾಗವತ ಎಂದು ಕರೆಯಲಾಗುತ್ತದೆ. ಆತ ಹಾಡುವಾಗ ತಾಳ ಲಯ ತಪ್ಪದಿರಲು ಜಾಗಟೆ ಅಥವಾ ಸಣ್ಣ ಚಕ್ರತಾಳ ಬಳಸುತ್ತಾನೆ. ಶ್ರುತಿಗಾಗಿ ಹಾರ್ಮೋನಿಯಂ ಬಳಕೆಯಾಗುತ್ತದೆ. ನಿರ್ದಿಷ್ಟ ಶ್ರುತಿ ಇಟ್ಟು ಹಾರ್ಮೋನಿಯಂ ಬಾರಿಸುವವನ್ನು ಸಂಗೀತಗಾರ ಎಂದು ಕರೆಯುವ ರೂಢಿಯಿದೆ. ಭಾಗವತನ ಹಾಡಿಗೆ ಪೂರಕವಾಗಿ ಚೆಂಡೆ ಮತ್ತು ಮದ್ದಳೆ ವಾದಕರಿರುತ್ತಾರೆ. ಇವರಲ್ಲಿ ಹಿರಿಯವನು ಇಡಿ ಮದ್ಲೆಗಾರ ಮತ್ತು ಕಿರಿಯವನು ಒತ್ತು ಮದ್ಲೆಗಾರ ಎಂದು ಕರೆಯಲ್ಪಡುತ್ತಾನೆ. ಹಿರಿತನ ಮತ್ತು ಕಿರಿತನಗಳು ವಯಸ್ಸಿನಿಂದ ನಿರ್ಣಯವಾಗದೆ ಅನುಭವ ದಿಂದ ನಿರ್ಧರಿಸಲ್ಪಡುತ್ತವೆ. ವೀರರಸದ ಅಭಿವ್ಯಕ್ತಿಯ ಸಂದರ್ಭದಲ್ಲಿ ದೊಡ್ಡ ಚಕ್ರತಾಳದ ಬಳಕೆಯಾಗುತ್ತದೆ. ಹಾಡುಹಿಮ್ಮೇಳಗಳಿಗೆ ಅನುಸರಿಸಿ ಕಲಾವಿದರು ಮಾಡುವ ಚಲನೆಗೆ ನಾಟ್ಯ ಅಥವಾ ನೃತ್ಯವೆಂದು ಹೆಸರು. ಕೈಕರಣ ಮತ್ತು ಮುಖಭಾವವು ಅಭಿನಯವಾದರೆ, ಕಾಲಿನ ಚಲನೆಯು ಹೆಜ್ಜೆಗಾರಿಕೆ ಎಂದು ಕರೆಯಲ್ಪಡುತ್ತದೆ. ನೃತ್ಯದ ಗತಿಯು ಪಾತ್ರದ ಪ್ರಕಾರವನ್ನು ಅವಲಂಬಿಸಿಕೊಂಡಿರುತ್ತದೆ.

3. ವೇಷಭೂಷಣ ಮತ್ತು ಮುಖವರ್ಣಿಕೆ :

ಯಕ್ಷಗಾನದ ಪಾತ್ರಗಳಿಗೆ ನಿರ್ದಿಷ್ಟ ವೇಷಭೂಷಣ ಮತ್ತು ಮುಖ ವರ್ಣಿಕೆಗಳಿವೆ. ಯಕ್ಷಗಾನದ ಪಾತ್ರಗಳನ್ನು ಪೀಠಿಕೆ ವೇಷ, ರಾಜ ವೇಷ, ಎದುರು ವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀವೇಷ ಮತ್ತು ಹಾಸ್ಯದ ವೇಷಗಳೆಂದು ವರ್ಗೀಕರಿಸಿ ವೇಷ ಭೂಷಣ ಮತ್ತು ಮುಖವರ್ಣಿಕೆಯನ್ನು ನಿರ್ಧರಿಸಲಾಗು ತ್ತದೆ. ಸಾಧಾರಣವಾಗಿ ಪೀಠಿಕೆ ವೇಷ ಸೌಮ್ಯ ಸ್ವಭಾವದ್ದಾಗಿದ್ದು ಸಾತ್ತ್ನಿಕ ಗುಣವನ್ನು ಹೊಂದಿರುತ್ತದೆ. ರಾಜಸ ಗುಣವನ್ನು ಎದುರು ವೇಷಗಳಲ್ಲಿ ಮತ್ತು ತಾಮಸ ಗುಣವನ್ನು ಬಣ್ಣದ ವೇಷಗಳಲ್ಲಿ ಕಾಣಬಹುದು. ರಾಕ್ಷಸ ಪಾತ್ರಗಳು ಬಣ್ಣದ ವೇಷದಲ್ಲಿ ಒಳಗೊಳ್ಳುತ್ತವೆ.

ರಕ್ಕಸಿಯರನ್ನು ಹೆಣ್ಣು ಬಣ್ಣ ಎಂದು ಕರೆಯಲಾಗುತ್ತದೆ. ಹನುಮಂತ, ಜಾಂಬವಂತ, ವರಾಹ, ನರಸಿಂಹ, ಗಣಪತಿ, ನಂದಿ, ಸಿಂಹ, ದುಂಬಿ, ಮತ್ಸ್ಯವಾನರ, ಗರುಡ, ತಕ್ಕ ಇತ್ಯಾದಿ ಪಾತ್ರಗಳು ಯಕ್ಷಗಾನದ ವರ್ಗೀಕೃತ ವೇಷ ಪ್ರಕಾರಗಳಲ್ಲಿ ಒಳಗೊಳ್ಳದೆ ಪ್ರತ್ಯೇಕವಾಗಿ ನಿಲ್ಲುತ್ತವೆ. ಈ ಪಾತ್ರಗಳ ಮುಖವರ್ಣಿಕೆ ಕಲಾವಿದರಿಗೊಂದು ಸವಾಲು. ಯಕ್ಷಗಾನ ವಿಶ್ವದ ಅತ್ಯಂತ ಆಕರ್ಷಕ ಕಲೆ ಎನಿಸಿಕೊಳ್ಳಲು ಹೊಸ ವಿಶ್ವವನ್ನು ನಿರ್ಮಿಸುವ ವೇಷಭೂಷಣ, ಕಿರೀಟ ಮತ್ತು ಮುಖ ವರ್ಣಿಕೆಗಳು ಕಾರಣವಾಗಿವೆ.

4. ಮಾತು ಅಥವಾ ಸಂಭಾಷಣೆ:

ಯಕ್ಷಗಾನದ ಮಾತು ಅಥವಾ ಸಂಭಾಷಣೆಗೆ ‘ಅರ್ಥ’ ಎಂದು ಹೆಸರು. ಪ್ರಸಂಗದ ಪದ್ಯಗಳ ಅರ್ಥವನ್ನು ಮಾತಿನ ಮೂಲಕ ಅಭಿವ್ಯಕ್ತಿಸು ವುದರಿಂದಾಗಿ ಈ ಹೆಸರು. ಭರತನಾಟ್ಯ, ಕಥಕ್ಕಳಿ, ಒಡಿಸ್ಸಿ, ಮೋಹಿನಿಯಾಟ್ಟಂ ಇತ್ಯಾದಿ ಕಲಾ ಪ್ರಕಾರಗಳಲ್ಲಿ ‘ಮಾತು’ ಇಲ್ಲ. ಯಕ್ಷಗಾನದಲ್ಲಿ ಇದೆ. ಆದುದರಿಂದ ಯಕ್ಷಗಾನ ದಲ್ಲಿ ಭಾವದ ಜತೆಯಲ್ಲಿ ಬುದ್ಧಿಗೂ ಕೆಲಸ ದೊರೆಯುತ್ತದೆ. ಮಾತಿಗೆ ಮಾತ್ರ ಅವಕಾಶ ವಿರುವ ಯಕ್ಷಗಾನದ ಒಂದು ಪ್ರಕಾರವಾಗಿ ತಾಳಮದ್ದಳೆ ಕಾಲಕೇಪ ನಡೆಯುತ್ತದೆ. ಪುರಾಣಗಳ ಅಂತರ್ಗತ ಮೌಲ್ಯಗಳ ಮಂಡನೆ ಮತ್ತು ಖಂಡನೆಗೆ ಅರ್ಥಗಾರಿಕೆಯಲ್ಲಿ ವಿಪುಲಾವಕಾಶವಿದೆ. ‘ಮಾತು’ ಯಕ್ಷಗಾನದ ಆಕರ್ಷಣೆಯೂ ಹೌದುದ ಮಿತಿಯೂ ಹೌದು. ಮಾತನ್ನು ಕನ್ನಡದಲ್ಲೇ ಆಡಬೇಕಿರುವುದರಿಂದ ಯಕ್ಷಗಾನವು ಒಂದು ಪ್ರಾದೇಶಿಕ ಕಲೆಯಾಗಿದೆ. ಯಕ್ಷಗಾನ ಅರ್ಥಧಾರಿಗಳು ಮತ್ತು ಪ್ರೇಕಕರು ಮಾತಿನಿಂದಾಗಿ ಪ್ರತ್ಯುತ್ಪನ್ನ ಮತಿಗಳೂ, ಬುದ್ಧಿವಂತರೂ ಆಗಿರುತ್ತಾರೆ.

ಹುಟ್ಟು ಮತ್ತು ಬೆಳವಣಿಗೆ

ಯಕ್ಷಗಾನವು ಜಾನಪದ ಕಲೆಯೇ, ಅಥವಾ ಶಾಸ್ತ್ರೀಯವೆ? ಇದರ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಜಾನಪದ ಶಾಸ್ತ್ರೀಯಗಳ ಗೊಂದಲ ನಿವಾರಣೆಗಾಗಿ ಯಕ್ಷಗಾನವನ್ನು ಸಾಂಪ್ರದಾಯಿಕ ಕಲೆ ಎಂದು ವ್ಯಾಖ್ಯಾನಿಸುವುದು ಒಳಿತೆಂಬ ಅಭಿಪ್ರಾಯವೂ ಇದೆ.

ತಾಳಮದ್ದಳೆಯ ಒ೦ದು ದೃಶ್ಯ ( ಸಾ೦ದರ್ಭಿಕ ಚಿತ್ರ )
ಶಿವರಾಮ ಕಾರಂತರ ಪ್ರಕಾರ ‘ಯಕ್ಷಗಾನವನ್ನು ಕುರಿತು ಮಾತಾಡುವಾಗ ನಾನು ‘ಜಾನಪದ’ ಎಂಬ ಶಬ್ದವನ್ನು ಬಳಸಿರುವೆನಾದರೂ ಅದು ಲಘುವಾಗಿ ಎಣಿಸತಕ್ಕ ಪದವಲ್ಲ. ‘ಮಾರ್ಗ’ಕ್ಕೆ ಪ್ರತಿಯಾದ ‘ದೇಸಿ’ ಎಂಬಂತೆ ತಾತ್ಸಾರಕ್ಕೆ ಗುರಿಯಾಗುವ ವಸ್ತುವಲ್ಲ. ಅದರ ಅಂಗಗಳಾದ ಕುಣಿತ, ಸಂಗೀತ, ಉಡುಗೆ, ಅಲಂಕಾರಗಳು ವಿಶೇಷ ರೀತಿಯ ವಿಕಾಸವನ್ನು ಪಡೆದವು. ನನ್ನ ಪಾಲಿಗೆ ಅವು, ‘ಮಾರ್ಗ’ ಅನ್ನಿಸಿಕೊಳ್ಳುವ ಭರತನಾಟ್ಯದಂತೆ, ಹಾಗೆ ಅನಿಸಿಕೊಳ್ಳುವ ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತ ಪದ್ಧತಿಗಳಂತೆ ವಿಕಾಸವನ್ನು ಪಡೆದಿರುವ ಅಂಶಗಳು. ಅದನ್ನು ಜಾನಪದ ಕಲೆ ಎಂದು ಕರೆಯಲು ಕಾರಣ ರಾಜರ ಆಸರೆಯಲ್ಲಿ ಅದು ಬೆಳೆದದ್ದಲ್ಲ, ಜಾನಪದದ ಪೋಷಣೆಯಿಂದ ಅದು ಬೆಳೆದು ಬಂತು ಎಂಬುದರಿಂದಷ್ಟೇ. [ ಯಕ್ಷಗಾನ, ಪುಟ 5]

ಕಾರಂತರ ಅಭಿಪ್ರಾಯವನ್ನು ಹೀಗೆ ವಿಶ್ಲೇಷಿಸಬಹುದು.

ಯಕ್ಷಗಾನವು ಹುಟ್ಟಿದ್ದು ಮತ್ತು ಬೆಳವಣಿಗೆ ಹೊಂದಿದ್ದು ರಾಜರುಗಳ ಆಶ್ರಯ ವಿಲ್ಲದೆ ಜನಸಾಮಾನ್ಯರುಗಳಿಂದ. ಜಾನಪದರಿಂದ ಹುಟ್ಟಿ, ಬೆಳೆದ ಕಾರಣ ಅದೊಂದು ಜಾನಪದ ಕಲೆ. ಯಕ್ಷಗಾನದ ಕುಣಿತ, ಸಂಗೀತ, ಉಡುಗೆ ಮತ್ತು ಅಲಂಕಾರಗಳು ವಿಕಾಸ ಹೊಂದಿ ಮಾರ್ಗ ಸ್ವರೂಪವನ್ನು ಪಡೆದರೂ ಜಾನಪದವೇ ಅದರ ತಾಯಿ ಬೇರು.

ಅಮೃತ ಸೋಮೇಶ್ವರರ ಪ್ರಕಾರ ‘ಈ ವಿಶಿಷ್ಟ ಕಲೆಯ ಚರಿತ್ರೆ ಹಾಗೂ ಸ್ವರೂಪ ಗಳನ್ನು ಗಮನಿಸಿದಾಗ ಇದು ನೂರಕ್ಕೆ ನೂರು ಶಾಸ್ತ್ರೀಯ ವೆಂದಾಗಲೀ ಅಥವಾ ಪೂರ್ತಿ ಜಾನಪದವೆಂದಾಗಲೀ ಹೇಳಲು ಕಷ್ಟವಾಗುತ್ತದೆ. ಯಕ್ಷಗಾನವನ್ನು ಪ್ರಾದೇಶಿಕ ವೈಶಿಷ್ಟ್ಯವುಳ್ಳ ದೇಸಿ ಕಲೆ ಎಂದು ಸ್ವೀಕರಿಸಿದರೂ ಅದರಲ್ಲಿ ಅಂತರ್ಗತವಾಗಿರುವ ಜನಪದ ಅಂಶಗಳನ್ನಾಗಲೀ, ಶಾಸ್ತ್ರೀಯನ್ನಾಗಲೀ ಕಡೆಗಣಿಸಲಾಗುವುದಿಲ್ಲ. ಹಾಗಾಗಿ ಇದನ್ನೊಂದು ಸಮ್ಮಮಿಶ್ರ ಕಲೆಯೆಂದೋ, ಸಮನ್ವಯ ಶೀಲ ಸಮಷ್ಟಿ ಕಲೆಯೆಂದೋ ಪರಿಭಾವಿಸಬೇಕಾಗುತ್ತದೆ. [ ಯಕ್ಷಾಂದೋಳ, ಪುಟ 155]

ಕಥಕ್ಕಳಿ
ಕೇಶವ ಭಟ್ಟರ ಅಭಿಪ್ರಾಯದಂತೆ ‘ಯಕ್ಷಗಾನವೆಂಬುದು ಒಂದು ಜಾನಪದ ಸಮ್ಮಮಿಶ್ರ ಕಲೆ. ಅದು ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರ ಪ್ರಾಂತಗಳಲ್ಲಿಯೂ ಪ್ರಚಲಿತವಿದೆ. ಆಂಧ್ರ ದೇಶದ ವೀಧಿ ನಾಟಕ, ಕೇರಳದ ಕಥಕ್ಕಳಿ, ತಮಿಳು ನಾಡಿನ ತೆರುಕ್ಕೂತು, ಹಾಗೂ ಉತ್ತರ ದೇಶಗಳಲ್ಲಿ ರಾಮಲೀಲಾ ಇತ್ಯಾದಿ ರೂಪಗಳಲ್ಲಿ ಯಕ್ಷಗಾನವನ್ನೇ ಹೋಲುವ ಪ್ರದರ್ಶನಗಳಿರುತ್ತವೆ. ಆಯಾ ಪ್ರದೇಶದ ಜನರಿಗೆ ತಮ್ಮ ಪ್ರದೇಶದಲ್ಲಿ ಪ್ರಚಲಿತವಿರುವ ಯಕ್ಷಗಾನ ಸ್ವರೂಪವೇ ಹೃದಯ ರಂಜಕವೆನಿಸುವುದು ಸಹಜ. ಇದರಿಂದ ಯಕ್ಷಗಾನವು ಒಂದು ದೇಶೀಯ ಸಂಗೀತವೆಂದು ಹೇಳಬಹುದು.’

ಯಕ್ಷಗಾನ ಕಾವ್ಯ ಸಂಪ್ರದಾಯ ದಕಿಣ ಭಾರತದಲ್ಲಿ ಸುಮಾರು ಕ್ರಿ.ಶ. ಹನ್ನೆರಡನೆಯ ಶತಮಾನದ ಅಂದಾಜಿಗೆ ಇತ್ತೆಂದು ಅಭಿಪ್ರಾಯಪಡಲಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಶಿವಭಕ್ತರಿಂದ ಶಿವಶರಣರ ಮೇಳಗಳು ಮತ್ತು ವೈಷ್ಣವರಿಂದ ದೇವದಾಸರ ಮೇಳಗಳು ಊರಿಂದೂರಿಗೆ ಸಂಚರಿಸಿ ಬಯಲಾಟ ಪ್ರದರ್ಶನ ಮಾಡುತ್ತಿದ್ದುದನ್ನು ರಾಘವ ನಂಬಿಯಾರ್‌ ಉಲ್ಲೇಖಿಸಿದ್ದಾರೆ [ಹಿಮ್ಮೇಳ, ಪುಟ 29] ಅವರು ಅದನ್ನು ದೇವಾಲಯ ಮೂಲವಾದ ರಂಗಕಲೆಯೆಂದು ಪರಿಭಾವಿಸುತ್ತಾರೆ.

ಯಕ್ಷಗಾನದ ಬೆಳವಣಿಗೆ

ಯಕ್ಷಗಾನದ ಇತಿಹಾಸದ ರಚನೆ ಬಗ್ಗೆ ಈ ಕೆಳಗಿನ ಐದು ಅಂಶಗಳು ನೆರವಾಗುತ್ತವೆ :

  1. ಪಾಣೆ ಮಂಗಳೂರಿನ ಕ್ರಿ. ಶ. 1204ರ ಶಾಸನವೊಂದರಲ್ಲಿ ಕೂತ್ತಾಡಿಗಳ ಉಲ್ಲೇಖ ವಿದೆಯೆಂದು ಸಂಶೋಧಕ ಮಂಜೇಶ್ವರ ಮುಕುಂದ ಪ್ರಭು ತೋರಿಸಿಕೊಟ್ಟಿದ್ದಾರೆ. ಇದು ಯಕ್ಷಗಾನದ ಪೂರ್ವರೂಪ ಆಗಿರುವ ಸಂಭವವಿದೆ.
  2. ಯಕ್ಷಗಾನ ಕವಿ ಮತ್ತು ಯಕ್ಷಗಾನಕ್ಕೊಂದು ಖಚಿತ ರೂಪ ನೀಡಿದ ಕುಂಬಳೆ ಪಾರ್ತಿ ಸುಬ್ಬನ ಕಾಲ ಕ್ರಿ. ಶ. 1590-1630 ಎಂಬ ಅಭಿಪ್ರಾಯ ಪಡಲಾಗಿದೆ. ಆ ಕಾಲಕ್ಕಾಗುವಾಗ ಯಕ್ಷ ರಂಗಭೂಮಿ ಸಾಕಷ್ಟು ಬೆಳವಣಿಗೆ ಕಂಡಿರಬೇಕು.
  3. ಕರಾವಳಿ ಕರ್ನಾಟಕದಲ್ಲಿ ಲಭ್ಯವಾದ ಮೊತ್ತಮೊದಲ ಯಕ್ಷಗಾನ ಪ್ರಸಂಗ ಕ್ರಿ.ಶ. 1564ರ ವಿಷ್ಣು ಕವಿಯ ವಿರಾಟ ಪರ್ವ. ಅದಕ್ಕೆ ಸಾಕಷ್ಟು ಪೂರ್ವದಲ್ಲಿ ಯಕ್ಷಗಾನ ಬೆಳವಣಿಗೆ ಹೊಂದಿರಬೇಕು.
  4. ಐತಿಹ್ಯಗಳ ಪ್ರಕಾರ ಕೂಡ್ಲು ಮೇಳಕ್ಕೆ ನಾಲ್ಕು ಶತಮಾನಗಳ ಇತಿಹಾಸವಿದ್ದರೆ ಮಂದರ್ತಿ, ಅಮೃತೇಶ್ವರಿ ಮತ್ತು ಧರ್ಮಸ್ಥಳ ಮೇಳಗಳಿಗೆ ಮೂರು ಶತಮಾನಗಳ ಇತಿಹಾಸವಿದೆ. ಆದುದರಿಂದ ಯಕ್ಷಗಾನ 16ನೇ ಶತಮಾನದಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸಿರಬೇಕೆಂಬ ತೀರ್ಮಾನಕ್ಕೆ ಬರಬಹುದು.
  5. ಹದಿನೇಳನೆಯ ಶತಮಾನದಲ್ಲಿ ಸಾಕಷ್ಟು ಯಕ್ಷ ಪ್ರಸಂಗಗಳು ರಚನೆಯಾಗಿವೆ. ಯಕ್ಷಗಾನಕ್ಕೆ ಅದಕ್ಕಿಂತಲೂ ಹಿಂದೆ ಕನಿಷ್ಠ ಎರಡು ಶತಮಾನಗಳ ಇತಿಹಾಸ ಇರುವ ಸಾಧ್ಯತೆಗಳಿವೆ ಪ್ರಭಾಕರ ಜೋಷಿ[ ಕೇದಗೆ, ಪುಟ 67]


ಯಕ್ಷಗಾನವು ಅವಿದ್ಯಾವಂತರಾದ ಶೂದ್ರ ಮತ್ತು ಅತಿಶೂದ್ರ ವರ್ಗದ ಭೂಮಿಯ ಒಡೆತನ ಹೊಂದಿಲ್ಲದ ಬಡವರಿಂದ ಬೆಳೆದು ಬಂದ ಒಂದು ಮೌಖಿಕ ಮತ್ತು ದೃಶ್ಯ ಸಂಪ್ರದಾಯವಾಗಿದೆ. ದೇವಾಲಯದೊಳಗೆ ಇವರಿಗೆ ಆ ಕಾಲದಲ್ಲಿ ಪ್ರವೇಶ ಇಲ್ಲದ್ದಕ್ಕೆ ದೇವಾಲಯದ ಹೊರಗೆ ಹಾಡುನರ್ತನ ಮೂಲಕ ದೇವರನ್ನು ಅವರು ಆರಾಧಿಸುತ್ತಿದ್ದಿರ ಬೇಕು. ಕಾಲಕ್ರಮೇಣ ವಿದ್ಯಾವಂತರು ಮತ್ತು ಮೇಲ್ವರ್ಗದವರು ಕಲೆಯಿಂದ ಆಕರ್ಷಿತರಾಗಿ ಅದಕ್ಕೆ ಮಾರ್ಗಸ್ವರೂಪವನ್ನು ನೀಡುವ ಯತನ ಮಾಡಿರಬೇಕು.

ಶೂದ್ರರಿಂದ ಮತ್ತು ಶೂದ್ರಾತಿಶೂದ್ರರಿಂದ ಹುಟ್ಟಿದ ಜಾನಪದ ಕಲೆ ಯಕ್ಷಗಾನದ ಬಗ್ಗೆ ವಿಪ್ರವರ್ಗದ ಬಹುತೇಕರಿಗೆ ಹಿಂದೆ ತಿರಸ್ಕಾರವಿತ್ತು. ಯಕ್ಷಗಾನ ಕೀಳುಜಾತಿಯ ಜನರ ಕಲೆ ಎಂಬ ಕಾರಣಕ್ಕೆ ತನ್ನ ಅಜ್ಜಿ ತನ್ನನ್ನು ಯಕ್ಷಗಾನಕ್ಕೆ ಸೇರಲು ಬಿಡದುದನ್ನು ತಮ್ಮ ಆತ್ಮ ಚರಿತ್ರೆ ಯಕ್ಷೋಪಾಸನೆಯಲ್ಲಿ ಖ್ಯಾತ ಕಲಾವಿದ ಸೂರಿಕುಮೇರಿ ಗೋವಿಂದ ಭಟ್ಟರು ಹೇಳಿಕೊಂಡಿದ್ದಾರೆ. ಒಂದು ಯಕ್ಷಗಾನ ಬಯಲಾಟ ನೋಡಿದರೆ ಎಂಟು ರಂಗಪೂಜೆ ಮಾಡಿ ಪಾಪ ಪರಿಹಾರ ಮಾಡಿಕೊಳ್ಳಬೇಕೆಂಬ ನಂಬಿಕೆ ವಿಪ್ರವರ್ಗದಲ್ಲಿದ್ದುದನ್ನು ಹಳೆಯ ಕಲಾವಿದರು ಈಗಲೂ ನೆನಪಿಸಿಕೊಳ್ಳುತ್ತಾರೆ. ‘ಮೇಳದವ’ ಎಂದರೆ ಜಾತಿಯಿಂದ ಹೊರಗಟ್ಟಿದವನೆಂಬ ಭಾವನೆ ಜನರಲ್ಲಿದ್ದು ಆತನಿಗೆ ಸಹಪಂಕ್ತಿ ಭೋಜನ ನಿರಾಕರಿಸುತ್ತಿದ್ದುದನ್ನು ಮತ್ತು ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದುದನ್ನು ಯಕ್ಷಗಾನದ ಭೀಷ್ಮ ಶೇಣಿ ಗೋಪಾಲ ಕೃಷ್ಣಭಟ್ಟರು ಎಷ್ಟೋ ಸಭೆ ಸಮಾರಂಭಗಳಲ್ಲಿ ಹೇಳಿದ್ದಿದೆ. ಅಂದಿಗೂ ಅಷ್ಟೇ, ಇಂದಿಗೂ ಅಷ್ಟೇ. ಯಕ್ಷಗಾನ ರಾಜಾಶ್ರಯವಿಲ್ಲದೆ ಬೆಳೆದು ಬಂದ ಒಂದು ಸ್ವಯಂಭೂ ಕಲೆ. ಈಗಲೂ ಯಕ್ಷಗಾನ ಬಯಲಾಟದ ಬಹುತೇಕ ಪ್ರೇಕಕರು ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಜಾನಪದೀಯರು. ಈ ಅರ್ಥದಲ್ಲಿ ಅದು ಜಾನಪದ ಕಲೆಯಾಗಿಯೇ ಉಳಿದಿದೆ.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಯಕ್ಷಗಾನಕ್ಕೆ ಸಮಗ್ರವಾಗಿ ಬೆಳವಣಿಗೆ ಹೊಂದಿತು. ಕುಂಬಳೆ ಪಾರ್ತಿಸುಬ್ಬ ಯಕ್ಷಗಾನಕ್ಕೆ ಆವಿಷ್ಕಾರಿಕ ರೂಪ ನೀಡಿದನೆಂದು ಹೇಳಲಾಗುತ್ತದೆ. ಯಕ್ಷಗಾನವು ಕಥಕ್ಕಳಿ, ತೆಯ್ಯಂ, ಭೂತ, ಧಕ್ಕೆಬಲಿ ಮುಂತಾದ ಕಲೆ ಮತ್ತು ಆರಾಧನಾ ಪ್ರಕಾರದಿಂದ ಪ್ರಭಾವಿತವಾಗಿ ಬೆಳೆಯಿತು.

ಯಕ್ಷಗಾನದ ಜಾನಪದೀಯ ಅಂಶಗಳು

ಯಕ್ಷಗಾನದ ಹಾಡು, ಕುಣಿತ, ವೇಷ ಭೂಷಣಮುಂತಾದವುಗಳು ಮಾರ್ಗ ಸ್ವರೂಪವನ್ನು ಪಡೆದಿದ್ದರೂ ಅದರಲ್ಲಿ ಸಾಕಷ್ಟು ಜಾನಪದೀಯ ಅಂಶಗಳಿವೆ. ಅವುಗಳನ್ನು ಹೀಗೆ ಗುರುತಿಸಬಹುದು.

ಬಯಲು ರಂಗಮಂದಿರ :

ಯಕ್ಷಗಾನ ಬಯಲಾಟಗಳು ಬಹುತೇಕವಾಗಿ ಬಯಲು ಅಥವಾ ಮೈದಾನ ಪ್ರದೇಶಗಳಲ್ಲಿ ನಡೆಯುತ್ತವೆ. ಜಾನಪದ ಕಲೆಗಳು ಜನರ ಮಧ್ಯೆ ಹಾಗೆ ನಡೆಯುವುದು ಬಹು ಪುರಾತನ ಕ್ರಮ.

ಪೂರ್ವರಂಗ ಸಂಪ್ರದಾಯ :

ಯಕ್ಷಗಾನವು ದೀರ್ಘವಾದ ಪೂರ್ವರಂಗವನ್ನು ಹೊಂದಿದೆ. ಶಾಸ್ತ್ರೀಯ ಕಲೆಗಳಲ್ಲಿ ಪೂರ್ವರಂಗ ಇಲ್ಲವೆಂದಲ್ಲದ ಅದು ಬಹಳ ಹೃಸ್ವವಾಗಿರುತ್ತದೆ.

ಗಾಯಕರೊಡನೆ ಸಂಭಾಷಣೆ :

ಯಕ್ಷಗಾನ ರಂಗದಲ್ಲಿ ಎದುರು ಪಾತ್ರವಿಲ್ಲ ದಿರುವಾಗ ಪಾತ್ರಧಾರಿ ಭಾಗವತನೊಡನೆ ಮಾತುಕತೆ ನಡೆಸುತ್ತಾನೆ. ಇದು ಜಾನಪದ ರಂಗಭೂಮಿಯ ಲಕ್ಷಣವಾಗಿದೆ.

ಜನಪದ ವ್ಯಕ್ತಿತ್ವಗಳು :

ಯಕ್ಷಗಾನ ಪೂರ್ವರಂಗದಲ್ಲಿ ಮಂತ್ರವಾದಿ, ಒಂಟಿ ಬ್ರಾಹ್ಮಣ, ಅಗಸ, ವಿಧವೆ, ಗಡಿಗೆ ಮಾರುವವ, ಕಳ್ಳ, ಪಂಡಿತ, ಪೊರ್ಬು, ಬ್ಯಾರಿ, ಕೊಕ್ಕೆ ಚಿಕ್ಕ, ಬೈರಾಗಿ, ರಂಗರಂಗಿ ಇತ್ಯಾದಿ ವೇಷಗಳು ಬರುತ್ತಿದ್ದವು. ಈ ಜನಪದ ವ್ಯಕ್ತಿತ್ವಗಳು ಯಕ್ಷಗಾನದಲ್ಲಿ ಜಾನಪದೀಯ ಅಂಶಗಳು ಒಳಗೊಳ್ಳುವ ಹಾಗೆ ಮಾಡಿವೆ.

ಜನಪದ ಕಲೆಗಳ ಪ್ರಭಾವ :

ಯಕ್ಷಗಾನದ ಮುಖವರ್ಣಿಕೆ ಮತ್ತು ವೇಷ ಭೂಷಣಗಳ ಮೇಲೆ ಭೂತಾರಾಧನೆ, ಧಕ್ಕೆಬಲಿ, ತೆಯ್ಯಂ ಮುಂತಾದ ಜಾನಪದ ಆರಾಧನಾ ಕಲೆಗಳ ದಟ್ಟ ಪ್ರಭಾವವಿದೆ.

ಚೆಂಡೆಯವನ ಚಲನೆ :

ಮುಮ್ಮೇಳದೊಂದಿಗೆ ಹಿಮ್ಮೇಳ ಚಲಿಸುವುದು ಜನಪದ ರಂಗಭೂಮಿಯ ಒಂದು ಲಕ್ಷಣ. ಕಳೆದ ಶತಮಾನದ ಪೂರ್ವಾರ್ಧದವರೆಗೆ ಯಕ್ಷಗಾನ ದಲ್ಲೂ ಆ ಸಂಪ್ರದಾಯವಿತ್ತು. ತೆಂಕುತಿಟ್ಟಿನ ಯಕ್ಷಗಾನದಲ್ಲಿ ಚೆಂಡೆಯವ ನಿಂತಿರುತ್ತಾನೆ ಮತ್ತು ವೇಷಗಳ ಪ್ರವೇಶಕ್ಕೆ ಅನುಕೂಲವಾಗಲು ಅತ್ತಿತ್ತ ಚಲಿಸುತ್ತಿರುತ್ತಾನೆ.

ಜನಪದ ಮಟ್ಟು :

ಯಕ್ಷಗಾನ ಹಾಡುಗಾರಿಕೆಯಲ್ಲಿ ಜನಪದ ಮಟ್ಟಿನ ಬಳಕೆ ತೀರಾ ಸಾಮಾನ್ಯ. ಅಂಗದ ಸಂಧಾನದಲ್ಲಿ ‘ಏನ್‌ ಮ್ಯಾ ರಾವಣ’ ಎಂಬ ಹಾಡಿದೆ. ಸುಭದ್ರಾ ಪರಿಣಯದಲ್ಲಿ ‘ಎಲೆ ಎಲೆ ಹಾರ್ವಾ ಯಾರ್‌ಮ್ಯಾ ನೀನು ಹೊಲದೊಳಗೇನ್‌ ಮಾಡ್ತಿ’ ಎಂಬ ಜಾನಪದ ಧಾಟಿಯ ಪದ್ಯವೊಂದಿದೆ. ಯಕ್ಷಗಾನದ ಬೇಡರು ಮತ್ತು ಬೆಸ್ತರು ಇಂದಿಗೂ ಜಾನಪದೀಯ ಶೈಲಿಯಲ್ಲಿಯೇ ಮಾತಾಡುತ್ತಾರೆ.

ಕಥಾ ಪ್ರಸಂಗಗಳು :

ಯಕ್ಷಗಾನದಲ್ಲಿ ಅನೇಕ ಜಾನಪದ ಪ್ರಸಂಗಗಳಿವೆ. ಉದಾ : ಚಂದ್ರಾವಳೀ ವಿಲಾಸ, ಗಂಧರ್ವಭಾನುಮತಿ ಪ್ರಕರಣ, ಇತ್ಯಾದಿ. ಮೂಲ ಕತೆಯಲ್ಲಿ ಇಲ್ಲದ ಪಾತ್ರಗಳನ್ನು ರಂಗಕ್ಕೆ ತರುವುದು ಕೂಡಾ ಜಾನಪದೀಯ ಅಂಶವಾಗಿದೆ. ಉದಾತ ಭೀಷ್ಮ ವಿಜಯದ ವೃದ್ಧ ಬ್ರಾಹ್ಮಣ, ಕೀಚಕನ ದೂತ, ರಾವಣನ ದೂತ, ಬಪ್ಪನೊಡನೆ ಉಸ್ಮಾನ್‌ ಇತ್ಯಾದಿ.

ಸಾಂಪ್ರದಾಯಿಕ ವಲ್ಲದ ಪ್ರವೇಶ :

ಸಾಮಾನ್ಯವಾಗಿ ಯಕ್ಷಪಾತ್ರಗಳು ಭಾಗವತರ ಎಡಭಾಗದಿಂದ ಪ್ರವೇಶಿಸಿ ಬಲಭಾಗದಿಂದ ನಿರ್ಗಮಿಸುತ್ತವೆ. ಆದರೆ ಯಕ್ಷಗಾನದಲ್ಲಿ ಅನೇಕ ರಕ್ಕಸರ ಅಥವಾ ಬಣ್ಣದ ವೇಷಗಳು ಸಭೆಯ ಮಧ್ಯದಿಂದ ಪ್ರವೇಶಿಸುವ ಕ್ರಮವಿದೆ. ಉದಾ : ಮಹಿಷಾಸುರ, ಮಧುಕೈಟಭ, ಚಂಡಮುಂಡ, ವೀರಭದ್ರ, ರುದ್ರಭೀಮ ಇತ್ಯಾದಿ.

ಆಡು ನುಡಿಗಳ ಬಳಕೆ :

ಯಕ್ಷಗಾನದಲ್ಲಿ ಜನಪದರ ಆಡು ನುಡಿಗಳು ಅಲ್ಲಲ್ಲಿ ಬಳಕೆಯಾಗುತ್ತವೆ. ಉದಾತ ಅಟ್ಟೆ, ಅಂಡು, ದಗಲೆ, ಚಿಟ್ಟೆ ಪಟ್ಟಿ, ಕೋಡಂಗಿ, ಬಾಲ್ಮುಂಡು, ತಿರ್ಗಾಸ್‌ ನಡೆ, ಪಿದಂಬು ಪೆಟ್ಟು, ದೊಂದಿ, ತಡ್ಪೆ ಕಿರೀಟಿ, ಇತ್ಯಾದಿ. ಹಾಗೆಯೇ ಜಾನಪದೀಯ ಗಾದೆ ಮಾತುಗಳು ಮತ್ತು ಒಗಟುಗಳೂ ಕೂಡಾ ಅಲ್ಲಲ್ಲಿ ಉಪಯೋಗಿಸಲ್ಪಡುತ್ತವೆ. ಹೆಣ್ಣು ಬಣ್ಣದೊಡನೆ ಭಾಗವತರ ಸಂಭಾಷಣಾ ಕ್ರಮವನ್ನು ಶಿಷ್ಟ ಎನ್ನುವಂತೆಯೇ ಇಲ್ಲ.

********************


ಕೃಪೆ : www.chilume.com

ಚಿತ್ರಗಳ ಕೃಪೆ : ಅ೦ತರ್ಜಾಲದಲ್ಲಿ ಯಕ್ಷಗಾನಾಭಿಮಾನಿಗಳಿ೦ದ ಪ್ರಕಟಿಸಲ್ಪಟ್ಟ ಸ೦ಗ್ರಹದಿ೦ದ


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
sandeep(2/17/2016)
Very nice and informative article sir




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ